ಈಜಿಪ್ಟಿನ ಭಾಷೆ 
ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು ಆಫ್ರಿಕ ದೇಶದ ಉತ್ತರ ಭಾಗದ ಸುಪ್ರಸಿದ್ಧ ನೈಲ್ ನದಿಯ ಕಣಿವೆಯ ಪ್ರದೇಶದಲ್ಲಿ ಪ್ರಚಲಿತವಾಗಿತ್ತು. ಈ ಭಾಷೆ ಸ್ಥೂಲವಾಗಿ ಆಫ್ರೋ-ಏಷ್ಯ ಎಂದು ಕರೆಯಲ್ಪಡುವ ಭಾಷಾವರ್ಗಕ್ಕೆ ಸೇರಿದ್ದು ಬರ್ಬರ್, ಕುಶೈಟ್ ಮತ್ತು ಚಾಡ್ ಎಂಬ ಇತರ ಭಾಷೆಗಳೊಡನೆ ಹೆಮಿಟಿಕ್ ಎಂಬ ಭಾಷಾ ಗುಂಪಿಗೆ ಒಳಪಟ್ಟಿದೆ. ಹೆಮಿಟಿಕ್ ಭಾಷಾ ಗುಂಪಿಗೂ ಸಿಮಿಟಿಕ್ ಎಂದು ಕರೆಯಲ್ಪಡುವ ಭಾಷಾ ಗುಂಪಿಗೂ ನಿಕಟವಾದ ಸಂಬಂಧವಿರುವುದರಿಂದ ಇವೆರಡನ್ನೂ ಹೆಮಿಟೊ-ಸಿಮಿಟಿಕ್ ಭಾಷಾವರ್ಗವೆಂದು ಹೇಳುವುದುಂಟು. ಈಜಿಪ್ಟಿನ ಭಾಷೆಯ ಅತಿ ಪ್ರಾಚೀನ ಉಲ್ಲೇಖ ನೈಲ್ ನದಿಯ ಕಣಿವೆಯಲ್ಲಿ ದೊರೆತ, ಸುಮಾರು ಕ್ರಿ. ಪೂ. ನಾಲ್ಕು ಸಾವಿರ ವರ್ಷದ್ದೆಂದು ಗುರುತಿಸಲಾದ, ಚಿತ್ರಲಿಪಿಯ (ಹೀರೋಗ್ಲಿಫ್) ಶಾಸನಗಳಲ್ಲಿ ಕಂಡುಬರುವುದು. ಈ ಚಿತ್ರಲಿಪಿಯಲ್ಲಡಗಿದ ಈಜಿಪ್ಟ್ ಭಾಷೆಯನ್ನು ಈಜಿಪ್ಟ್ ಮತ್ತು ಗ್ರೀಕ್ ಭಾಷೆಗಳ ದ್ವಿಭಾಷಾಯುತವಾದ ರೋಸೆಟ್ಟ ಶಿಲಾಲೇಖದ ಸಹಾಯದಿಂದ ಫ್ರೆಂಚ್ ವಿದ್ವಾಂಸ ಶಾಂಪೋಲಿಯೊ ಕ್ರಿ. ಶ. 1822ರಲ್ಲಿ ಓದಿ ಗುರುತಿಸಿದ. ಈ ಭಾಷೆ ಸಾಂಕೇತಿಕವಾಗಿಯೂ ಧ್ವನಿಸೂಚಕವಾಗಿಯೂ ಇರುವ ಅಂಶ ತಿಳಿದಿದೆ. ಇಲ್ಲಿಯ ಭಾಷೆಗೂ ಮೆಸೊಪೊಟೇಮಿಯದ ಸುಮೇರಿಯನ್ ಸಂಸ್ಕøತಿಗೆ ಸಂಬಂಧಿಸಿದ ಕೀಲಕ್ಷರಗಳ (ಕ್ಯೂನಿಫಾರಂ) ಶಾಸನಗಳಲ್ಲಡಗಿದ ಭಾಷೆಗೂ ಭಾರತದೇಶದ ಸಿಂಧೂ ಸಂಸ್ಕøತಿಗೆ ಸಂಬಂಧಿಸಿದ ಚಿತ್ರಲಿಪಿಯಲ್ಲಡಗಿದ ಭಾಷೆಗೂ ಪರಸ್ಪರ ಸಂಬಂಧವುಂಟೆಂದು ಕೆಲವು ವಿದ್ವಾಂಸರು ಭಾವಿಸುವರು.

	ಈಜಿಪ್ಟಿನ ಭಾಷೆಯ ಚರಿತ್ರೆಯಲ್ಲಿ ಮೂರು ಹಂತಗಳನ್ನು ಗುರುತಿಸಲಾಗಿದೆ. ಅತಿ ಪ್ರಾಚೀನವಾದ ಅವಸ್ಥೆ ಈಜಿಪ್ಟಿನ ಇತಿಹಾಸದ ಮೊಟ್ಟಮೊದಲನೆಯ ಅರಸು ಮನೆತನದ ಕಾಲದ ಚಿತ್ರಲಿಪಿಗಳಲ್ಲೂ ರಾಜರು ಮೃತಪಟ್ಟಮೇಲೆ ಅವರ ಸಲುವಾಗಿ ನಿರ್ಮಿಸಿದ ಅದ್ಬುತಗಾತ್ರದ ಸಮಾಧಿಗಳಾದ ಪಿರಮಿಡ್ಡುಗಳ ಮೇಲೆ ಬರೆದಿರುವ ಚಿತ್ರಲಿಪಿಗಳಲ್ಲೂ ಕಂಡುಬರುವುದು. ಇದರ ಕಾಲಾವಧಿ ಸುಮಾರು ಕ್ರಿ.ಪೂ. 4000ವರ್ಷದಿಂದ ಕಿ.ಪೂ. 3000 ವರ್ಷದವರೆಗೆ. ಮಧ್ಯಕಾಲದ ಹಾಗೂ ತದನಂತರದ ಭಾಷೆಯ ಹಂತ 3000ದಿಂದ ಕ್ರಿ.ಪೂ. 400ರ ವರೆಗಿನ ಅವಧಿಯ ಬರೆವಣಿಗೆಯಲ್ಲಿ ಕಂಡುಬರುವುದು. ಈ ಬರೆವಣಿಗೆ ಒಂದು ತರದ ಹುಲ್ಲಿನ ಕಾಗದದ (ಪಪೈರಸ್) ಮೇಲೂ ಡೆಮೊಟಿಕ್ ಎಂದು ಕರೆಯಲ್ಪಡುವ ಲಿಪಿಯಲ್ಲೂ ಕಂಡುಬರುವುದು. ಕೊನೆಯ ಹಂತ ಈಜಿಪ್ಟಿನಲ್ಲಿ ಕ್ರಿಸ್ತಧರ್ಮ ಪ್ರವೇಶಿಸಿದ ಅನಂತರ ಕ್ರಿ.ಶ. 2-3ನೆಯ ಶತಮಾನದಲ್ಲಿ ಕೊಪ್ಪಿಕ್ ಎಂದು ಕರೆಯಲ್ಪಡುವ ಜನಸಾಮಾನ್ಯರ ಭಾಷೆಯಲ್ಲಿ ಪರಿವರ್ತನೆಯಾದದ್ದು ಕಂಡುಬರುವುದು. ಈ ಕೊಪ್ಪಿಕ್ ಭಾಷೆಯ ಸಹಾಯದಿಂದ ಪ್ರಾಚೀನ ಹಾಗೂ ಮಧ್ಯಕಾಲದ ಈಜಿಪ್ಟ್ ಭಾಷೆಯ ಸ್ವರೂಪವನ್ನು ತಿಳಿದುಕೊಳ್ಳುವುದು ಸಾಧ್ಯವಾಗಿದೆ. ಕೊಪ್ಪಿಕ್ ಭಾಷೆಯ ಬೆಳೆವಣಿಗೆ ಕ್ರಿ. ಶ. 15-16ನೆಯ ಶತಮಾನದವರೆಗೂ ಕಂಡುಬರುವುದು. ಮುಂದೆ ಕ್ರಿ.ಶ. 17ನೆಯ ಶತಮಾನದಲ್ಲಿ ಅರಬ್ಬೀ ಭಾಷೆ ಈ ಪ್ರದೇಶದಲ್ಲಿ ಪ್ರಚಾರವಾದ ಅನಂತರ ಈಜಿಪ್ಟ್ ಭಾಷೆಯ ಬಳಕೆ ಪೂರ್ಣವಾಗಿ ನಿಂತುಹೋಯಿತು.

	ಈಜಿಪ್ಟ್ ಭಾಷೆಯ ಪ್ರಾಚೀನ ಸ್ವರೂಪದಲ್ಲಿ ವ್ಯಾಕರಣದ ಬೆಳೆವಣಿಗೆ ಕಂಡುಬರುವುದಿಲ್ಲ. ಧಾತುಗಳೂ ಶಬ್ದಗಳೂ ಒಂದೇ ರೂಪವನ್ನು ತಾಳಿದ್ದು ಅವುಗಳಲ್ಲಿ ನಾಮ, ಕ್ರಿಯಾಪದ ಮತ್ತು ವಿಶೇಷಣ ಮುಂತಾದ ವಿವಿಧ ರೂಪಗಳನ್ನು ವಿಂಗಡಿಸಿ ತೋರಿಸುವ ವಿಧಾನಗಳಿಲ್ಲ. ಉದಾ: ಅಂಖ್ ಎಂಬ ಶಬ್ದ ಜೀವಿಸು, ಜೀವನ ಮತ್ತು ಜೀವಂತ ಎಂಬ ಮೂರೂ ಆರ್ಥಗಳನ್ನು ಸೂಚಿಸುವುದು. ಸೆಖಿ ಎಂಬ ಶಬ್ದಕ್ಕೆ ಬರೆ, ಬರೆವಣಿಗೆ ಮತ್ತು ಬರೆಹಗಾರ ಎಂಬ ಮೂರೂ ಆರ್ಥಗಳುಂಟು. ಪುಲ್ಲಿಂಗ ಹಾಗೂ ಸ್ತ್ರೀಲಿಂಗ ಎಂಬ ಎರಡು ಲಿಂಗಗಳ ಭೇದವನ್ನು ಗುರುತಿಸುವುದು ಈ ಭಾಷೆಯ ಮುಖ್ಯ ಲಕ್ಷಣವಾಗಿದ್ದು ಇಂಡೋ-ಯೂರೋಪಿಯನ್ ಮತ್ತು ಸಿಮಿಟಿಕ್ ಭಾಷಾವರ್ಗಗಳಲ್ಲಿರುವಂತೆ ಇಲ್ಲೂ ಶಬ್ದಗಳನ್ನು ಲಿಂಗಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ಈಜಿಪ್ಟಿನ ಭಾಷೆಯಲ್ಲಿ ವಿಭಕ್ತಿಪ್ರತ್ಯಯಗಳನ್ನು ವಿಂಗಡಿಸುವ ವಿಧಾನವಿಲ್ಲ. ಆದರೆ ಏಕವಚನ, ದ್ವಿವಚನ ಮತ್ತು ಬಹುವಚನಗಳೆಂದು ಮೂರು ವಚನಗಳನ್ನು ಸೂಚಿಸುವ ವಿಧಾನವುಂಟು.
(ಜಿ.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ